Saturday, September 19, 2009

18.09.2009


ಬೆಂಗಳೂರು, ಸೆ.೧೮: ಯಕ್ಷಗಾನ ಕ್ಷೇತ್ರದ ಶ್ರೇಷ್ಠ ಕಲಾವಿದನಿಗೆ ೨೦೦೯-೧೦ನೆ ಸಾಲಿನಲ್ಲಿ ಸರಕಾರದ ವತಿಯಿಂದ ‘ಪಾರ್ಥಿ ಸುಬ್ಬ’ ಹೆಸರಿನಲ್ಲಿ ೧ಲಕ್ಷ ರೂ. ನಗದು ಪ್ರಶಸ್ತಿ ನೀಡಿ ಗೌರವಿಸಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ವಿ.ಎಸ್.ಆಚಾರ್ಯ ಹೇಳಿದ್ದಾರೆ.ಮೊಗವೀರ ಸಂಘದ ವತಿಯಿಂದ ಶನಿವಾರ ನಗರದ ಪುರಭವನದಲ್ಲಿ ಏರ್ಪಡಿಸಲಾಗಿದ್ದ ಮೊಗರ ಪ್ರತಿಭೋತ್ಸವ ಹಾಗೂ ೨೦೦೯ನೆ ಸಾಲಿನ ಯಕ್ಷ ವೈಭವ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸರಕಾರದ ವತಿಯಿಂದ ೨೦೦೯- ೧೦ನೆ ಸಾಲಿನ ಕಲಾವಿದರಿಗೆ ನೀಡುವ ಪ್ರಶಸ್ತಿ ಮಾಲಿಕೆಯಲ್ಲಿ ಶ್ರೇಷ್ಠ ಯಕ್ಷಗಾನ ಕಲಾವಿದನಿಗೆ ‘ಪಾರ್ಥಿ ಸುಬ್ಬ’ರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು. ಅಲ್ಲದೆ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂರು ಮಂದಿಗೆ ಮೂರು ಸಾವಿರ ರೂ. ನಗದು ಒಳಗೊಂಡ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ ಪ್ರಸಕ್ತ ಸಾಲಿನಿಂದ ೧೦ ಮಂದಿಯನ್ನು ಗುರುತಿಸಿ ೧೦ಸಾವಿರ ರೂ. ನಗದನ್ನು ಒಳಗೊಂಡ ಪ್ರಶಸ್ತಿ ನೀಡಲು ಚಿಂತನೆ ನಡೆಸಲಾಗಿದೆ ಎಂದು ಎಂದು ಆಚಾರ್ಯ ತಿಳಿಸಿದರು.ಯಕ್ಷಗಾನ ಅಕಾಡಮಿಯನ್ನು ಈಗಾಗಲೆ ಸ್ಥಾಪಿಸಿದ್ದು, ಕರಾವಳಿ ಭಾಗದಲ್ಲಿ ಯಕ್ಷಗಾನ ಸಭಾಭವನವನ್ನು ಸ್ಥಾಪಿಸಲು ೧ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಯುವ ಯಕ್ಷಗಾನ ಕಲಾವಿದರನ್ನು ಪ್ರೋತ್ಸಾಹಿಸಲು ಈಗಾಗಲೇ ಯಕ್ಷಗಾನ ತರಬೇತಿ ಶಾಲೆಯನ್ನು ತೆರೆಯಲಾಗಿದೆ. ಇದಲ್ಲದೆ, ಯಕ್ಷಗಾನ ಕಲಾವಿದರನ್ನು ತಯಾರಿ ಮಾಡುವ ಸಲುವಾಗಿ ಆ ಭಾಗದಲ್ಲಿನ ಎಸ್ಸೆಸ್ಸೆಲ್ಸಿವರೆಗಿನ ಮಕ್ಕಳಿಗೆ ಪ್ರತಿ ಡಿಸೆಂಬರ್ ತಿಂಗಳಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ಯಕ್ಷಗಾನ ತರಬೇತಿ ನೀಡಲು ಚಿಂತನೆ ನಡೆಸಿದೆ. ಹೀಗೆ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸುವತ್ತ ಸರಕಾರ ಗಮನ ಹರಿಸಿದೆ ಎಂದು ಆಚಾರ್ಯ ಹೇಳಿದರು.ಬಂದರು ಮತ್ತು ಒಳನಾಡ ಜಲಸಾರಿಗೆ ಸಚಿವ ಜೆ.ಕೃಷ್ಣ ಪಾಲೆಮಾರ್ ಮಾತನಾಡಿದರು. ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಎಂ.ಎ.ನಾಯಕ್ ಹಾಗೂ ಮಂಗಳೂರಿನ ಯಕ್ಷ ಮಂಜೂಷ ಸಂಸ್ಥೆಯ ನಿರ್ದೇಶಕಿ ವಿದ್ಯಾರನ್ನು ಸಚಿವ ಕೃಷ್ಣ ಪಾಲೆಮಾರ್ ಸನ್ಮಾನಿಸಿದರು.ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಾಸಕ ಲಾಲಾಜಿ ಆರ್.ಮೆಂಡನ್ ಭಾಗವಹಿಸಿದ್ದರು. (GulfKannadiga)

No comments: