


ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಎಲ್ಲಾ ಯೋಜನೆ, ಕಾರ್ಯಕ್ರಮಗಳನ್ನು ಈ ವರ್ಷದ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಡಾ. ಬಿ. ಎಸ್. ಯಡ್ಯೂರಪ್ಪ ಭರವಸೆ ನೀಡಿದರು.230 ಮೆಗಾವ್ಯಾಟ್ ಸಾಮರ್ಥ್ಯದ ವಾರಾಹಿ ಭೂಗರ್ಭ ಜಲವಿದ್ಯುತ್ ಯೋಜನೆಯ ಎರಡನೇ ಘಟಕದ 2ನೇ ಹಂತವನ್ನು ಶನಿವಾರ ರಾಷ್ಟ್ರಕ್ಕೆ ಸಮರ್ಪಿಸಿ, ಹೊಸಂಗಡಿ ಯೋಜನಾ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.ಅಭಿವೃದ್ಧಿಯಲ್ಲಿ ಪಕ್ಷ ರಾಜಕಾರಣ ಮಾಡುವುದಿಲ್ಲ. ಪಕ್ಷಾತೀತವಾಗಿ, ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗಿದೆ. ಅದಕ್ಕಾಗಿ ಸದ್ಯದಲ್ಲಿಯೇ ಎಲ್ಲಾ ಶಾಸಕರು, ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಲಾಗುವುದು. ತಮ್ಮ ಪಕ್ಷ ಅಧಿಕಾರಕ್ಕೆ ಬಂದ 7 ತಿಂಗಳ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಮುಲಭೂತ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಲಾಗಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ರಾಜ್ಯ ಅಭಿವೃದ್ಧಿಯಲ್ಲಿ ಇತರ ರಾಜ್ಯಗಳಿಗಿಂತ ಹಿಂದೆಬಿತ್ತು. ಸರಕಾರದ ಎಲ್ಲಾ ಯೋಜನೆಗಳು ಗ್ರಾಮೀಣ ಪ್ರದೇಶಗಳಿಗೆ ತಲುಪುವಂತಾಗಲು ಕಾರ್ಯಕ್ರಮ ರೂಪಿಸಲಾಗಿದೆ.ಪಶ್ಚಿಮ ಘಟ್ಟ ಮತ್ತು ಕರಾವಳಿ ಕರ್ನಾಟಕ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚಿಸಲಾಗಿದೆ. ಅಭಿವೃದ್ಧಿಗೆ ನೀರು ಮತ್ತು ವಿದ್ಯುತ್ ಅಗತ್ಯ ಎಂಬುದನ್ನು ಮನಗಂಡು ಅವುಗಳ ಸಮರ್ಪಕ ಬಳಕೆಗೆ ಆದ್ಯತೆ ನೀಡಲಾಗಿದೆ. ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದರ ಜೊತೆಗೆ ವಿದ್ಯುತ್ ಉತ್ಪಾದನೆಗೆ ಗಮನ ಹರಿಸಲಾಗುತ್ತಿದೆ. ನನ್ನ ಅಧಿಕಾರಾವಧಿಯಲ್ಲಿ 5 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿ ಇರಿಸಿಕೊಳ್ಳಲಾಗಿದ್ದು, ರಾಜ್ಯದಲ್ಲಿ ಮುಂದಿನ 10 ವರ್ಷಗಳ ಪರಿಯ೦ತ ವಿದ್ಯತ್ ಸಮಸ್ಯೆ ತಲೆದೋರದಂತೆ ಯೋಜನೆ ರೂಪಿಸಲಾಗಿದೆ.ಜನರಿಂದ ಚುನಾಯಿತರಾದ ಶಾಸಕರು, ಮಂತ್ರಿಗಳು ತಮ್ಮ ಅಧಿಕಾರಾವಧಿಯಲ್ಲಿ ಏನೇನು ಮಾಡಿದ್ದಾರೆ ಎಂಬುದನ್ನು ಜನತೆಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಪ್ರತೀ 100 ದಿನಗಳ ಸಾಧನೆಯ ವರದಿ ಪ್ರಜಾಪ್ರಭುಗಳಿಗೆ ನೀಡುವ ಹೊಸ ಪದ್ಧತಿ ನನ್ನಿಂದ ಶುರುವಾಗಿದೆ. ವಿರೋಧ ಪಕ್ಷಗಳು ಸಮರ್ಪಕವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದರು.ಈ ಸಂದರ್ಭದಲ್ಲಿ ವಾರಾಹಿ ಯೋಜನೆ ಕುರಿತ ಕೈಪಿಡಿಯನ್ನು ಇಂಧನ ಸಚಿವ ಕೆ. ಎಸ್. ಈಶ್ವರಪ್ಪ ಅನಾವರಣಗೈದರು.
ಬೈಂದೂರು ಶಾಸಕ ಕೆ. ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿದ್ದರು.
ಗೃಹಸಚಿವ ಡಾ. ವಿ. ಎಸ್. ಆಚಾರ್ಯ, ಇಂಧನ ಸಚಿವ ಕೆ. ಎಸ್. ಈಶ್ವರಪ್ಪ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗರಾಜ ಶೆಟ್ಟಿ , ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ, ಮಾಜಿ ಶಾಸಕ ಆರಗ ಜ್ಞಾನೇಂದ್ರ, 3ನೇ ಹಣಕಾಸು ಆಯೋಗ ಅಧ್ಯಕ್ಷ ಎ. ಜಿ. ಕೊಡ್ಗಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿ. ಪಂ. ಅಧ್ಯಕ್ಷ ರಾಜು ಪೂಜಾರಿ ಅಭ್ಯಾಗತರಾಗಿದ್ದರು. ಜಿಲ್ಲಾಧಿಕಾರಿ ಹೇಮಲತಾ, ಐಜಿಪಿ ಎ. ಎಂ. ಪ್ರಸಾದ್ ಮೊದಲಾದವರು ವೇದಿಕೆಯಲ್ಲಿದ್ದರು.ಕರ್ನಾಟಕ ವಿದ್ಯುತ್ ನಿಗಮ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್. ಎಂ. ಜಾಮದಾರ್ ಸ್ವಾಗತಿಸಿದರು. ನಿಗಮದ ಜಯರಾಂ ವಂದಿಸಿದರು.
ಇನ್ನಷ್ಟು ಚಿತ್ರ
English report