Showing posts with label k s eshwarappa. Show all posts
Showing posts with label k s eshwarappa. Show all posts

Sunday, October 12, 2008

ಜಾತಿ ವಿಷ ಬೀಜ ಬಿತ್ತುವ ಜನರಿಗೆ ಉಳಿಗಾಲ ಇಲ್ಲ

ಅನಗತ್ಯ ವಿವಾದ ಬೆಳೆಸುವ ರಾಜಕಾರಣಿಗಳಿಗೆ ಈಶ್ವರಪ್ಪ ಅವರ ಸಂದೇಶ ಮೇಲಿನಂತಿದೆ...(೧೫.೧೦.೨೦೦೮)
Click on above image for news in English
ಉಡುಪಿಯಲ್ಲೊಂದು ಕನಕದಾಸ ಅಧ್ಯಯನ ಪೀಠ

ಉಡುಪಿ,,11. ಜಾತಿ ವಿಷ ಬೀಜ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳು ವವರಿಗೆ ಉಳಿಗಾಲವಿಲ್ಲ. ಇದು ಇಂಧನ ಸಚಿವ ಕೆ, ಎಸ್. ಈಶ್ವರಪ್ಪ ಅವರ ಅಭಿಮತ.

ಅವರು ಉಡುಪಿ ಎಂಜಿ‌ಎಂ ಕಾಲೇಜಿನಲ್ಲಿ ಶನಿವಾರದ೦ದು ಆರಂಭಿ ಸಲಾದ ಕನಕದಾಸ ಅಧ್ಯಯನ ಸಂಶೋಧನ ಪೀಠ ಉದ್ಘಾಟನಾ ಸಮಾರ೦ಭದಲ್ಲಿ ಭಾಗವಹಿಸಿಮಾತನಾಡಿದರು.

ಜಾತಿ ಬೇಧ ಅಳಿಯದೇ ಯಾವುದೇ ಮಹಾಪುರುಷರ ಗುಣಗಾನವನ್ನೆಷ್ಟೇ ಮಾಡಲಿ, ಎಷ್ಟೇ ಪೀಠಗಳ ಸ್ಥಾಪನೆಯಾಗಲಿ ಅದರಿಂದ ಅವರಿಗೆ ಗೌರವ ಹೆಚ್ಚದು. ಸಮಾಜದಲ್ಲಿ ಸೌಹಾರ್ದತೆ ನೆಲೆಯಾದಾಗ, ಮಹಾನುಭಾವರ ಬೋಧನೆಗಳು ಕಾರ್ಯರೂಪಕ್ಕೆ ಬಂದಾಗ ಮಾತ್ರ ನಿಜವಾದ ಗೌರವ ಸಲ್ಲುತ್ತದೆ. ಈಚಿನ ದಿನಗಳಲ್ಲಿ ಹಿಂದೂಧರ್ಮವನ್ನು ಹಳಿಯುತ್ತಿರುವುದು ಹೆಚ್ಚಾಗುತ್ತಿದೆ. ಹಿಂದೂಧರ್ಮದಲ್ಲಿನ ಕೆಲವು ಲೋಪದೋಷಗಳನ್ನೇ ಬೊಟ್ಟುಮಾಡಿ, ಅದನ್ನೇ ದೊಡ್ಡದು ಮಾಡಿ ತಮ್ಮ ಧರ್ಮವನ್ನು ಟೀಕಿ ಸುವುದೇ ಘನಕಾರ್‍ಯ ಎಂದು ತಿಳಿದ ಕೆಲವೇ ಸಂಖ್ಯೆಯ ಮಂದಿಯ ವರ್ತನೆಯ ವಿರುದ್ಧ ಸೆಟೆದುನಿಲ್ಲುವ ಕಾಲ ಸನ್ನಿಹಿತವಾಗಿದೆ. ಧರ್ಮ, ದೇವರು, ಸ್ವಾಮೀಜಿಗಳನ್ನು ಹಳಿಯುವುದನ್ನೇ ಹವ್ಯಾಸವಾಗಿಸಿ ಕೊಂಡ ವರ ಕೆಲವರ ವಿರುದ್ಧ ದನಿ ಎತ್ತಬೇಕಾಗಿದೆ.

ಜಾತಿ- ಧರ್ಮದ ಹೆಸರಲ್ಲಿ ಎಂದೋ ನಡೆದ ಘಟನೆಯನ್ನು ಪದೇ ಪದೇ ಹೇಳಿಕೊಳ್ಳುತ್ತಿರುವುದರಲ್ಲಿ ಅರ್ಥವಿಲ್ಲ. ಆ ಕೆಲಸ ಮಾಡಿದವರನ್ನು ನಿರ್ದಿಷ್ಟ ಸಮುದಾಯ ಅಥವಾ ಜಾತಿಗೆ ಸೇರಿದವರು ಎಂದು ಹೇಳಲಾಗದು. ವ್ಯವಸ್ಥೆಗೆ ವಿರುದ್ಧವಾಗಿ ವರ್ತಿಸುವ ಮಂದಿ ಎಂದಷ್ಟೇ ಹೇಳಬೇಕಾಗಿದೆ. ಸಾಮುದಾಯಿಕ ಅಭಿವೃದ್ಧಿಗೆ ಮುಡಿಪಾಗಿಟ್ಟ ಮಹಾನುಭಾವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಸಚಿವ ಈಶ್ವರಪ್ಪ, ಅಂಥ ಮಹಾನುಭಾವರ ಸಂದೇಶಗಳು ಸಾರ್ವಕಾಲಿಕ ಹಾಗೂ ಸರ್ವರಿಗೂ ಹಿತಕಾರಕ ಎಂದರು. ಈ ಸಂದರ್ಭದಲ್ಲಿ ಅವರು ಹರಿಭಕ್ತಿ ಸಾರ ಪುಸ್ತಕ ಬಿಡುಗಡೆ ಮಾಡಿದರು.

ಕನಕದಾಸ ಅಧ್ಯಯನ ಸಂಶೋಧನ ಪೀಠವನ್ನು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಿದರು. ಕನಕದಾಸರಿಗೆ ಉಡುಪಿಯಲ್ಲಿ ಸಿಕ್ಕಷ್ಟು ಮನ್ನಣೆ ಇನ್ನೆಲ್ಲೂ ಲಭಿಸಿಲ್ಲ ಎಂದರು.

ಪೀಠದ ಲಾಂಛನವನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹಮಂತ್ರಿ ಡಾ. ವಿ. ಎಸ್. ಆಚಾರ್ಯ ಅನಾವರಣಗೊಳಿಸಿದರು.

ಕನಕದಾಸ ದೇಶ ಕಂಡ ಅಪೂರ್ವ ಸಂತರಲ್ಲಿ ಓರ್ವರು ಎಂದರು. ಈ ಪೀಠದಿಂದ ಕನಕದಾಸರ ಸಂದೇಶ ಪ್ರಚುರಪಡಿಸಲಾಗುವುದು. ಕನಕ ದಾಸರ ಬಗ್ಗೆ ಮುಂದಿನ ಪೀಳಿಗೆ ತಿಳಿಯುವಂತಾಗಲು ಕಾರ್‍ಯಕ್ರಮ ರೂಪಿಸಲಾಗುವುದು ಎಂದರು.

ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಎನ್‌ಆರ್ಐ ಸೆಲ್ ಅಧ್ಯಕ್ಷ ಕ್ಯಾ. ಗಣೇಶ ಕಾರ್ಣಿಕ್ ಹರಿಭಕ್ತಿ ಸಾರ ಸಿಡಿ ಬಿಡುಗಡೆಗೊಳಿಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಕನಕ ಅಧ್ಯಯನ ಪೀಠದ ವೆಬ್‌ಸೈಟ್ ಅನಾವರಣಗೊಳಿಸಿದರು. ಕಾರ್ಕಳ ಶಾಸಕ ಗೋಪಾಲ ಭಂಡಾರಿ, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕುಲಸಚಿವ ಕೆ. ಕೆ. ಪೈ, ಎಂಜಿ‌ಎಂ ಕಾಲೇಜು ಪ್ರಾಚಾರ್‍ಯ ಡಾ. ಜಯಪ್ರಕಾಶ ಮಾವಿನಕುಳಿ ವೇದಿಕೆಯಲ್ಲಿದ್ದರು.

ವಿದ್ವಾಂಸ ಅರುಣಕುಮಾರ್ ಎಸ್. ಆರ್. ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಎಂ. ಎಲ್. ಸಾಮಗ ಸ್ವಾಗತಿಸಿದರು. ಡಾ. ಪಾದೇಕಲ್ಲು ವಿಷ್ಣುಭಟ್ ಪ್ರಸ್ತಾವನೆಗೈದರು. ಎ. ಈಶ್ವರಯ್ಯ ಮತ್ತು ಪ್ರೊ. ಎ. ವಿ. ನಾವಡ ಅನುಕ್ರಮವಾಗಿ ಹರಿಭಕ್ತಿ ಸಾರ ಸಿಡಿ ಮತ್ತು ಮಾದರಿ ಪದಕೋಶ ಕುರಿತು ಮಾತನಾಡಿದರು.

ಫೂಟ್‌ಪಾತ್‌ಗೆ ಬಿದ್ದವರು-

ಕನಕದಾಸರ ಹೆಸರಲ್ಲಿ ಉಡುಪಿ ವಿರುದ್ಧ ಅಪಪ್ರಚಾರ ಮಾಡಿದ ಕುರುಬ ಸಮುದಾಯದ ವೀರರು ಏನಾದರು ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿ ದರು. ಇಲ್ಲದ ಕನಕಗೋಪುರ ವಿವಾದ ವನ್ನು ಸೃಷ್ಟಿಸಿ, ಅದನ್ನು ಧ್ವಂಸ ಮಾಡಿ ಕನಕದಾಸರಿಗೆ ಸಂಬಂಧಪಡದವರಿಂದ ಘಟನೆ ಬಗ್ಗೆ ಖಂಡನಾ ಭಾಷಣ ಬಿಗಿಸಿದ ಸಿದ್ಧರಾಮಯ್ಯ, ಎಚ್. ವಿಶ್ವನಾಥ ಈಗೆಲ್ಲಿದ್ದಾರೆ, ಅವರಿಗೆ ಯಾವ ಗತಿ ಪ್ರಾಪ್ತವಾಗಿದೆ ಎಂದು ನೇರವಾಗಿ ಪ್ರಶ್ನಿಸಿದ ಈಶ್ವರಪ್ಪ, ಘಟನೆ ಕುರಿತು ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಸಮಾವೇಶದಲ್ಲಿ ಭಾಷಣ ಬಿಗಿದವರು ಜಾಫರ್ ಶರೀಫ್ ಮತ್ತು ಸಿ. ಎಂ. ಇಬ್ರಾಹಿಂ ಎಂದು ಕುಹಕವಾಡಿದರು.

ಕನಕದಾಸರ ಹೆಸರಲ್ಲಿ ರಾಜಕೀಯ ಮಾಡಿದ ಈ ಮಂದಿ, ಘಟನೆಗೆ ಸಮಜಾಯಿಷಿ ನೀಡಲು ಪೇಜಾವರರಂಥ ಯತಿಗಳನ್ನು ಬೀದಿಗೆಳೆದು, ಬಳಿಕ ಈಗ ತಾವೇ ಫೂಟ್‌ಪಾತ್ ಪಾಲಾದರು. ಅಂಥವರಿಗೆ ಗುರುಶಾಪ ತಟ್ಟಿದೆ. ಪ್ರಾಯಶ್ಚಿತ್ತದ ವಿನಾ ಅವರಿಗೆ ಮೋಕ್ಷವಿಲ್ಲ ಎಂದು ಭವಿಷ್ಯ ನುಡಿದರು.

ಹಿಂದೂ ಧರ್ಮವನ್ನು ಹಳಿಯುವುದನ್ನೇ ಶೋಕಿಯನ್ನಾಗಿಸಿದ ಯು. ಆರ್. ಅನಂತಮೂರ್ತಿ ವರ್ತನೆಯೂ ಖಂಡನೀಯ ಎಂದರು ಸಚಿವ ಈಶ್ವರಪ್ಪ.

(ಸುದ್ದಿ ಕೃಪೆ /ಚಿತ್ರ : ಜೆ ಪಿ ಗಲ್ಫ್ ಕನ್ನಡಿಗ)