Monday, August 3, 2009

ಅಪ್ರಸ್ತುತ ಪ್ರಸಂಗಿಗಳು


ಲಾರಿ ಮಾಲಕರು ಪದೇ ಪದೇ ಮುಷ್ಕರ ಮಾಡಿ ರಾಜ್ಯದ ಜನತೆಗೆ ಅನಾವಶ್ಯಕ ಉಪದ್ರ ಕೊಡುವುದನ್ನು ತಪ್ಪಿಸಲು ಮತ್ತು ಮುಷ್ಕರದ ಸಮಯದಲ್ಲಿ ಹಾಲು, ತರಕಾರಿ, ಔಷಧಿಯಂತಹ ಅಗತ್ಯ ವಸ್ತುಗಳ ಸಾಗಣೆಗೆ ತಡೆ ಒಡ್ಡುವುದನ್ನು ತಪ್ಪಿಸಲು ರಾಜ್ಯ ಸರಕಾರ ಎಸ್ಮಾ ಕಾಯಿದೆ ಜಾರಿಗೆ ತಂದಿದೆ. ಇದರಿಂದ ಮುಷ್ಕರವೆಂಬ ಗುಮ್ಮ ತೋರಿಸಿ ಬೇಳೆ ಬೇಯಿಸಿಕೊಳ್ಳುತ್ತಿದ್ದ ಕೆಲವೇ ಕೆಲ ಲಾರಿ ಮಾಲಕರಿಗೆ, ಲಾರಿ ಮಾಲಕ ಸಂಘದ ಕೆಲವರಿಗೆ ತಲೆ ಬಿಸಿಯಾದಂತಿದೆ.
ವಿಧಾನಮಂಡಳದಲ್ಲಿ ಪಕ್ಷಾತೀತವಾಗಿ ಶಾಸಕರು ಮತ್ತು ಸಾರ್ವಜನಿಕರು ಎಸ್ಮಾ ಕಾಯಿದೆಯನ್ನು ಸ್ವಾಗತಿಸಿದ್ದಾರೆ. ಆದರೆ ಇಂದಿನ "ಕನ್ನಡಪ್ರಭ"ದಲ್ಲಿ ಲಾರಿ ಮಾಲಕರ ಸಂಘದ ಅಧ್ಯಕ್ಷ ಷಣ್ಣುಗಪ್ಪನವರು "ಆಚಾರ್ಯರ ಮನೆಮುಂದೆ ಲಾರಿ ನಿಲ್ಲುವಂತಿಲ್ಲ, ಹಾರ್ನ್ ಹಾಕುವಂತಿಲ್ಲ"ವೆಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.ಉಡುಪಿಯ ಮತ್ತು ಬೆಂಗಳೂರಿನ ಸಚಿವರ ಮನೆಗಳು ಲಾರಿಗಳು ಹೋಗುವಂತಹ ಮುಖ್ಯ ರಸ್ತೆಗಳಿಂದ ಬಹಳ ದೂರವಿದ್ದು ಇನ್ನು ಲಾರಿ ಹಾರ್ನುಗಳು ಎಷ್ಟೇ ಗಟ್ಟಿ ಕರ್ಕಶವಾಗಿ ಹಾಕಿದರೂ ಕೇಳದಷ್ಟು ದೂರದಲ್ಲಿವೆ ಎಂಬುದು ಪ್ರತಿನಿತ್ಯ ಮನೆಗೆ ಬರುವ ಸಾರ್ವಜನಿಕರಿಗೆ ಅದರಲ್ಲೂ ಮಾಧ್ಯಮ ಮಿತ್ರರಿಗೆ ತಿಳಿಯದೇ ಇರುವ ಸಂಗತಿಯಲ್ಲ. ಇದೇ ಷಣ್ಣುಗಪ್ಪನವರು ಹಿಂದಿನ ಸರಕಾರದ ಕಾಲದಲ್ಲಿ ಉಡುಪಿಯಲ್ಲಿ ಸಚಿವರ ಮೇಲೆ ಅದಿರು ಲಾರಿಗಳ ವೇ ಬ್ರಿಡ್ಜ್ ವಿಷಯದಲ್ಲಿ ವಿನಾ ಕಾರಣ ಆಪಾದನೆ ಮಾಡಿ ಮತ್ತೆ ಸಾರ್ವಜನಿಕರಿಂದ ಛೀಮಾರಿಗೊಳಗಾಗಿ ಕ್ಷಮಾಪಣೆ ಕೋರಿದವರು. ಹೀಗಿರುವಾಗ ಎಸ್ಮಾ ಕಾಯಿದೆಯಿಂದ ಕಂಗೆಟ್ಟ ಷಣ್ಣುಗಪ್ಪನಂತಹವರ ಬಾಯಿಂದ ಬಂದದನ್ನೇ "ತೀರ್ಥಾಮೃತ"ವೆಂದು ಭಾವಿಸಿ ಸಚಿವರಿಗೆ "ಬೆಟ್ಟದ ಮೇಲೊಂದು ಮನೆಯ ಮಾಡಿ"ಯೆಂದು ಸಲಹೆ ಕೊಡುವವರಿಗೇನೆನ್ನೋಣ?

No comments: